0:00
0:00

ಅಧ್ಯಾಯ 106

ನೀವು ಕರ್ತನನ್ನು ಸ್ತುತಿಸಿರಿ, ಕರ್ತನಿಗೆ ಉಪಕಾರ ಸ್ತುತಿಮಾಡಿರಿ; ಆತನು ಒಳ್ಳೆಯವನು, ಆತನ ಕರುಣೆಯು ಶಾಶ್ವತ ವಾಗಿರುವದು.
2 ಕರ್ತನ ಪರಾಕ್ರಮ ಕ್ರಿಯೆಗಳನ್ನು ಪ್ರಕಟಿಸುವವನಾರು? ಆತನ ಸ್ತೋತ್ರಗಳನ್ನು ಪ್ರಸಿದ್ಧಿ ಪಡಿಸುವವನಾರು?
3 ನ್ಯಾಯವನ್ನು ಕೈಕೊಂಡು ಎಲ್ಲಾ ಕಾಲದಲ್ಲಿ ನೀತಿಯನ್ನು ಮಾಡುವವರು ಧನ್ಯರು.
4 ಓ ಕರ್ತನೇ, ನಿನ್ನ ಜನರ ಮೇಲಿರುವ ಕಟಾಕ್ಷದಿಂದ ನನ್ನನ್ನೂ ಜ್ಞಾಪಿಸಿಕೋ; ನಿನ್ನ ರಕ್ಷಣೆಯಿಂದ ನನ್ನನ್ನು ದರ್ಶಿಸು.
5 ಕರ್ತನೇ, ನೀನು ಆದುಕೊಂಡವರ ಸುಖವನ್ನು ನಾನು ನೋಡಿ ನಿನ್ನ ಜನಾಂಗದ ಸಂತೋಷ ದೊಂದಿಗೆ ಸಂತೋಷಿಸಿ ನಿನ್ನ ಬಾಧ್ಯತೆಯ ಸಂಗಡ ಹೊಗಳಿಕೊಳ್ಳುವೆನು.
6 ನಮ್ಮ ತಂದೆಗಳ ಸಂಗಡ ನಾವು ಪಾಪಮಾಡಿದ್ದೇವೆ, ಅಕ್ರಮಮಾಡಿದ್ದೇವೆ, ದುಷ್ಟತ್ವವನ್ನು ನಡಿಸಿದ್ದೇವೆ.
7 ನಮ್ಮ ತಂದೆಗಳು ಐಗುಪ್ತದಲ್ಲಿ ನಿನ್ನ ಅದ್ಭುತಗಳನ್ನು ತಿಳಿಯದೆ ನಿನ್ನ ಕರುಣಾತಿಶಯವನ್ನು ನೆನಸದೆ, ಸಮುದ್ರದ ಬಳಿಯಲ್ಲಿ, ಅಂದರೆ ಕೆಂಪು ಸಮುದ್ರದ ಹತ್ತಿರ ನಿನಗೆ ತಿರುಗಿ ಬಿದ್ದರು.
8 ಆದಾಗ್ಯೂ ಆತನು ತನ್ನ ಮಹಾಶಕ್ತಿಯನ್ನು ಅವರಿಗೆ ತಿಳಿಯ ಮಾಡುವ ಹಾಗೆ ತನ್ನ ಹೆಸರಿನ ನಿಮಿತ್ತ ಅವರನ್ನು ರಕ್ಷಿಸಿದನು.
9 ಆತನು ಕೆಂಪು ಸಮುದ್ರವನ್ನು ಗದರಿಸಲು ಅದು ಒಣಗಿ ಹೋಯಿತು. ಹೀಗೆ ಜಲಾಗಾಧದಲ್ಲಿ, ಅರಣ್ಯ ದಲ್ಲಿದ್ದ ಹಾಗೆಯೇ ಆತನು ಅವರನ್ನು ನಡಿಸಿದನು.
10 ವೈರಿಯ ಕೈಯೊಳಗಿಂದ ಅವರನ್ನು ರಕ್ಷಿಸಿ, ಶತ್ರು ವಿನ ಕೈಯಿಂದ ಅವರನ್ನು ಬಿಡುಗಡೆ ಮಾಡಿದನು.
11 ನೀರುಗಳು ಅವರ ವೈರಿಗಳನ್ನು ಮುಚ್ಚಿಬಿಟ್ಟವು; ಅವರಲ್ಲಿ ಒಬ್ಬನಾದರೂ ಉಳಿಯಲಿಲ್ಲ.
12 ಆಗ ಅವರು ಆತನ ಮಾತುಗಳನ್ನು ನಂಬಿ ಆತನ ಸ್ತೋತ್ರ ವನ್ನು ಹಾಡಿದರು.
13 ಆತನ ಕೆಲಸಗಳನ್ನು ಬೇಗ ಮರೆತುಬಿಟ್ಟು ಆತನ ಆಲೋಚನೆಗೆ ಅವರು ಕಾದುಕೊಳ್ಳದೆ ಇದ್ದರು.
14 ಅರಣ್ಯದಲ್ಲಿ ದುರಾಶೆಯಿಂದ ಆಶಿಸಿ ಮರುಭೂಮಿ ಯಲ್ಲಿ ದೇವರನ್ನು ಪರೀಕ್ಷಿಸಿದರು.
15 ಆಗ ಅವರ ಬೇಡಿಕೆಯಂತೆ ಅವರಿಗೆ ಆತನು ಕೊಟ್ಟನು; ಆದರೆ ಅವರ ಪ್ರಾಣದಲ್ಲಿ ಕ್ಷೀಣತೆಯನ್ನು ಕಳುಹಿಸಿದನು.
16 ಅವರು ಪಾಳೆಯದಲ್ಲಿ ಮೋಶೆಯ ಮೇಲೆಯೂ ಕರ್ತನ ಪರಿಶುದ್ದನಾದ ಆರೋನನ ಮೇಲೆಯೂ ಹೊಟ್ಟೇಕಿಚ್ಚು ಪಟ್ಟರು.
17 ಭೂಮಿಯು ಬಾಯಿತೆರೆದು ದಾತಾನನನ್ನು ನುಂಗಿ ಅಬಿರಾಮನ ಗುಂಪನ್ನು ಮುಚ್ಚಿ ಬಿಟ್ಟಿತು.
18 ಬೆಂಕಿಯು ಅವರ ಗುಂಪಿನಲ್ಲಿ ಉರಿದು, ಜ್ವಾಲೆಯು ದುಷ್ಟರನ್ನು ಸುಟ್ಟಿತು.
19 ಅವರು ಹೋರೇಬಿ ನಲ್ಲಿ ಕರುವನ್ನು ಮಾಡಿ ಎರಕದ ವಿಗ್ರಹಕ್ಕೆ ಅಡ್ಡ ಬಿದ್ದರು.
20 ತಮ್ಮ ಘನವನ್ನು ಹುಲ್ಲು ತಿನ್ನುವ ಎತ್ತಿನ ರೂಪಕ್ಕೆ ಬದಲಾಯಿಸಿದರು.
21 ತಮ್ಮ ರಕ್ಷಕನಾಗಿ ಐಗುಪ್ತದೇಶದಲ್ಲಿ ದೊಡ್ಡ ಕೆಲಸಗಳನ್ನೂ
22 ಹಾಮನ ದೇಶದಲ್ಲಿ ಅದ್ಭುತಗಳನ್ನೂ ಕೆಂಪು ಸಮುದ್ರದ ಬಳಿ ಯಲ್ಲಿ ಭಯಂಕರವಾದವುಗಳನ್ನೂ ಮಾಡಿದ ದೇವ ರನ್ನು ಅವರು ಮರೆತರು.
23 ಆದದರಿಂದ ಆತನು ಅವರನ್ನು ನಾಶಮಾಡುತ್ತೇನೆಂದು ಹೇಳಿದನು. ಆದರೆ ಆತನು ಆದುಕೊಂಡ ಮೋಶೆಯು ಆತನ ಕೋಪ ವನ್ನು ತಿರುಗಿಸುವ ಹಾಗೆ ಆಪತ್ತಿನಲ್ಲಿ ಆತನ ಮುಂದೆ ನಿಂತುಕೊಂಡನು.
24 ಹೌದು, ಅವರು, ಮನೋಹರವಾದ ದೇಶ ವನ್ನು ಅಸಹ್ಯಿಸಿಬಿಟ್ಟು ಆತನ ಮಾತನ್ನು ನಂಬದೆ ಹೋದರು.
25 ತಮ್ಮ ಗುಡಾರಗಳಲ್ಲಿ ಗುಣುಗುಟ್ಟಿ ಕರ್ತನ ಸ್ವರವನ್ನು ಕೇಳದೆ ಹೋದರು.
26 ಆದದರಿಂದ ಅವರನ್ನು ಅರಣ್ಯದಲ್ಲಿ ಕೆಡವುವದಕ್ಕೂ
27 ಅವರ ಸಂತತಿಯನ್ನು ಜನಾಂಗಗಳಲ್ಲಿ ಕೆಡವಿ, ಅವರನ್ನು ದೇಶಗಳಲ್ಲಿ ಚದರಿಸುವದಕ್ಕೂ ಆತನು ತನ್ನ ಕೈಯನ್ನು ಅವರ ಮೇಲೆತ್ತಿದನು.
28 ಬಾಳ್‌ಪೆಗೊ ಯೋರಿಗೆ ಕೂಡಿಕೊಂಡು ಸತ್ತವರಿಗೆ ಅರ್ಪಿಸಿದ ಬಲಿಗಳನ್ನು ತಿಂದು
29 ತಮ್ಮ ಕ್ರಿಯೆಗಳಿಂದ ಆತನಿಗೆ ಕೋಪವನ್ನು ಎಬ್ಬಿಸಿದರು; ಆದದರಿಂದ ವ್ಯಾಧಿಯು ಅವರಲ್ಲಿ ಹೊಕ್ಕಿತು.
30 ಆಗ ಫೀನೆಹಾಸನು ನಿಂತು ಕೊಂಡು ನ್ಯಾಯತೀರಿಸಿದ್ದರಿಂದ ವ್ಯಾಧಿಯು ನಿಂತು ಹೋಯಿತು.
31 ಇದು ತಲತಲಾಂತರಕ್ಕೂ ಯುಗ ಯುಗಕ್ಕೂ ಆತನಿಗೆ ನೀತಿಯೆಂದು ಎಣಿಸಲ್ಪಟ್ಟಿತು.
32 ಅವರು ವಿವಾದದ ನೀರಿನ ಬಳಿಯಲ್ಲಿ ಆತನಿಗೆ ಕೋಪವನ್ನೆಬ್ಬಿಸಿದರು; ಅವರ ನಿಮಿತ್ತ ಮೋಶೆಗೆ ಕೇಡು ಬಂತು.
33 ಅವರು ದೇವರಾತ್ಮನನ್ನು ಕೆಣ ಕಿದರು; ಆದದರಿಂದ ಅವನು ಬುದ್ಧಿಹೀನತೆಯಿಂದ ಮಾತನಾಡಿದನು.
34 ಕರ್ತನು ಅವರಿಗೆ ಹೇಳಿದ ಜನಗಳನ್ನು ಅವರು ನಾಶಮಾಡದೆ ಹೋದರು.
35 ಆದರೆ ಅನ್ಯಜನಾಂಗ ಗಳ ಸಂಗಡ ಕೂಡಿಕೊಂಡು; ಅವರ ಕೆಲಸಗಳನ್ನು ಕಲಿತುಕೊಂಡರು.
36 ಅವರ ವಿಗ್ರಹಗಳಿಗೆ ಸೇವೆ ಮಾಡಿದರು ಅವು ಅವರಿಗೆ ನೇಣು ಆದವು.
37 ತಮ್ಮ ಗಂಡು ಹೆಣ್ಣು ಮಕ್ಕಳನ್ನೂ ದೆವ್ವಗಳಿಗೆ ಅರ್ಪಿಸಿದರು.
38 ಇದಲ್ಲದೆ ತಮ್ಮ ಗಂಡು ಹೆಣ್ಣು ಮಕ್ಕಳ ನಿರಪರಾ ಧದ ರಕ್ತವನ್ನು ಚೆಲ್ಲಿ, ಕಾನಾನಿನ ವಿಗ್ರಹಗಳಿಗೆ ಅರ್ಪಿಸಿ; ದೇಶವನ್ನು ರಕ್ತದಿಂದ ಅಶುದ್ಧಮಾಡಿದರು.
39 ಹೀಗೆ ತಮ್ಮ ಕೆಲಸಗಳಿಂದ ತಮ್ಮನ್ನು ಹೊಲೆಮಾಡಿಕೊಂಡು, ತಮ್ಮ ಕ್ರಿಯೆಗಳಿಂದ ಜಾರರಾದರು.
40 ಆಗ ಕರ್ತನ ಕೋಪವು ಆತನ ಜನರಿಗೆ ವಿರೋಧವಾಗಿ ಉರಿ ಯಿತು; ಆತನು ತನ್ನ ಸ್ವಂತ ಬಾಧ್ಯತೆಯನ್ನು ಅಸಹ್ಯಿಸಿ ಕೊಂಡು
41 ಅವರನ್ನು ಅನ್ಯಜನಾಂಗಗಳ ಕೈಗೆಕೊಟ್ಟನು; ಅವರ ಹಗೆಯವರು ಅವರನ್ನು ಆಳಿದರು.
42 ಅವರ ಶತ್ರುಗಳು ಅವರನ್ನು ಬಾಧೆಪಡಿಸಿದರು; ಅವರ ಕೈಕೆಳಗೆ ಅಧೀನರಾದರು.
43 ಬಹಳ ಸಾರಿ ಆತನು ಅವರನ್ನು ಬಿಡಿಸಿದನು; ಆದರೆ ಅವರು ತಮ್ಮ ಆಲೋಚನೆಯಿಂದ ಆತನಿಗೆ ಕೋಪವನ್ನೆಬ್ಬಿಸಿದರು. ತಮ್ಮ ಅಕ್ರಮದಿಂದ ಅವರು ಕುಗ್ಗಿಹೋದರು.
44 ಆದಾಗ್ಯೂ ಅವರ ಕೂಗನ್ನು ಆತನು ಕೇಳಿದಾಗ ಅವರ ಇಕ್ಕಟ್ಟಿನ ಮೇಲೆ ಲಕ್ಷ್ಯವಿಟ್ಟು
45 ಅವರಿಗಾಗಿ ತನ್ನ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಂಡು ತನ್ನ ಅತಿಶಯವಾದ ಕರು ಣೆಯ ಪ್ರಕಾರ ಪಶ್ಚಾತ್ತಾಪಪಟ್ಟನು.
46 ಅವರನ್ನು ಸೆರೆಹಿಡಿದವರ ಮುಂದೆ ಅವರು ಕರುಣೆ ಹೊಂದುವಂತೆ ಮಾಡಿದನು.
47 ಓ ನಮ್ಮ ದೇವರಾದ ಕರ್ತನೇ, ನಾವು ನಿನ್ನ ಪರಿಶುದ್ಧ ಹೆಸರಿಗೆ ಉಪಕಾರಸ್ತುತಿ ಮಾಡಿ ನಿನ್ನ ಸ್ತೋತ್ರದಲ್ಲಿ ಜಯಘೋಷ ಮಾಡುವ ಹಾಗೆ ನಮ್ಮನ್ನು ರಕ್ಷಿಸು. ಅನ್ಯಜನಾಂಗಗಳೊಳಗಿಂದ ನಮ್ಮನ್ನು ಹೊರಗೆ ಬರಮಾಡು.
48 ಇಸ್ರಾಯೇಲಿನ ದೇವರಾದ ಕರ್ತನಿಗೆ ಯುಗಯುಗಾಂತರಕ್ಕೂ ಸ್ತುತಿಯುಂಟಾಗಲಿ. ಜನರೆಲ್ಲಾ ಆಮೆನ್‌ ಎಂದು ಹೇಳಲಿ. ನೀವು ಕರ್ತನನ್ನು ಸ್ತುತಿಸಿರಿ.