ಯೆಶಾಯ
ಅಧ್ಯಾಯ 62
ಚೀಯೋನಿಗೋಸ್ಕರ ನಾನು ಮೌನವಾಗಿರುವದಿಲ್ಲ; ಯೆರೂಸಲೇಮಿಗೋಸ್ಕರ ಅದರ ನೀತಿ ಪ್ರಕಾಶದಂತೆಯೂ ಅದರ ರಕ್ಷಣೆಯು ಉರಿಯುವ ದೀವಿಗೆಯಂತೆಯೂ ಹೊರಡುವ ವರೆಗೆ ನಾನು ವಿಶ್ರಾಂತಿಯಿಂದ ಇರುವದಿಲ್ಲ.
2 ಆಗ ಅನ್ಯ ಜನಾಂಗಗಳು ನಿನ್ನ ನೀತಿಯನ್ನು ಅರಸರೆಲ್ಲರು ನಿನ್ನ ಮಹಿಮೆಯನ್ನು ನೋಡುವರು; ಕರ್ತನ ಬಾಯಿ ಉಚ್ಚರಿಸುವ ಹೊಸ ಹೆಸರಿನಿಂದ ನೀನು ಕರೆಯ ಲ್ಪಡುವಿ.
3 ಕರ್ತನ ಕೈಯಲ್ಲಿ ಮಹಿಮೆಯ ಕಿರೀಟ ವಾಗಿಯೂ ನಿನ್ನ ದೇವರ ಅಂಗೈಯಲ್ಲಿ ರಾಜತ್ವದ ಕಿರೀಟವಾಗಿಯೂ ಇರುವಿ.
4 ಇನ್ನು ಮೇಲೆ ನೀನು ಬಿಡಲ್ಪಟ್ಟವಳೆಂದು ಹೇಳಲ್ಪಡುವದಿಲ್ಲ, ಇಲ್ಲವೆ ನಿನ್ನ ದೇಶಕ್ಕೆ ಹಾಳಾದದ್ದೆಂದು ಹೇಳಲ್ಪಡುವದಿಲ್ಲ: ಆದರೆ ನೀನು (ಹೆಫ್ಜೀಬಾ) ಮೆಚ್ಚಿದವಳೆಂದೂ ನಿನ್ನ ದೇಶವು (ಬೆಯೂಲಾ) ಮದುವೆಯಾದದ್ದೆಂದೂ ಕರೆಯಲ್ಪ ಡುವದು; ಯಾಕಂದರೆ ಕರ್ತನು ನಿನ್ನಲ್ಲಿ ಉಲ್ಲಾಸಿಸು ವನು; ನಿನ್ನ ದೇಶವು ಮದುವೆಯಾಗುವದು.
5 ಯೌವನಸ್ಥನು ಕನ್ಯಾಸ್ತ್ರೀಯನ್ನು ಮದುವೆಮಾಡಿ ಕೊಳ್ಳುವ ಪ್ರಕಾರ ನಿನ್ನ ಕುಮಾರರು ನಿನ್ನನ್ನು ಮದುವೆ ಮಾಡಿಕೊಳ್ಳುವರು; ಮದಲಿಂಗನು ಮದಲಗಿತ್ತಿಯಲ್ಲಿ ಆನಂದಪಡುವ ಪ್ರಕಾರ ನಿನ್ನ ದೇವರು ನಿನ್ನಲ್ಲಿ ಆನಂದಪಡುವನು.
6 ಓ ಯೆರೂಸಲೇಮೇ, ನಿನ್ನ ಗೋಡೆಗಳ ಮೇಲೆ ಕಾವಲುಗಾರರನ್ನು ನೇಮಿಸಿದ್ದೇನೆ; ಅವರು ಹಗಲಿ ನಲ್ಲೂ ರಾತ್ರಿಯಲ್ಲೂ ಮೌನವಾಗಿರುವದೇ ಇಲ್ಲ. ಕರ್ತನನ್ನು ಜ್ಞಾಪಕಪಡಿಸುವವರೇ, ಸುಮ್ಮನಿರಬೇಡಿರಿ.
7 ಆತನು ಯೆರೂಸಲೇಮನ್ನು ಸ್ಥಾಪಿಸಿ ಅದು ಭೂಮಿಯಲ್ಲಿ ಸ್ತುತಿಸಲ್ಪಡುವಂತೆ ಮಾಡುವವರೆಗೂ ಆತನಿಗೆ ವಿಶ್ರಾಂತಿ ಕೊಡಬೇಡಿರಿ.
8 ಕರ್ತನು ತನ್ನ ಬಲಗೈ ಯಿಂದಲೂ ತನ್ನ ತ್ರಾಣವುಳ್ಳ ತೋಳಿನಿಂದಲೂ ಆಣೆ ಯಿಟ್ಟುಕೊಂಡದ್ದೇನಂದರೆ--ನಿಶ್ಚಯವಾಗಿ ನಾನು ಇನ್ನು ಮೇಲೆ ನಿನ್ನ ಧಾನ್ಯಗಳನ್ನು ನಿನ್ನ ಶತ್ರುಗಳಿಗೆ ಆಹಾರವಾಗಿ ಕೊಡುವದಿಲ್ಲ, ಮತ್ತು ನೀನು ಕಷ್ಟಪಟ್ಟು ಮಾಡಿದ ನಿನ್ನ ದ್ರಾಕ್ಷಾರಸವನ್ನು ಅನ್ಯರ ಪುತ್ರರು ಕುಡಿಯುವದಿಲ್ಲ;
9 ಆದರೆ ಅದನ್ನು ಕೂಡಿಸಿದವರು ಅದನ್ನು ತಿಂದು ಕರ್ತನನ್ನು ಸ್ತುತಿಸುವರು; ಅದನ್ನು ಸೇರಿಸಿ ತಂದವರು ನನ್ನ ಪರಿಶುದ್ಧ ಅಂಗಳಗಳಲ್ಲಿ ಅದನ್ನು ಕುಡಿಯುವರು.
10 ಹಾದುಹೋಗಿರಿ, ಬಾಗಿಲುಗಳನ್ನು ಹಾದು ಹೋಗಿರಿ. ಜನರಿಗೆ ದಾರಿಯನ್ನು ಸಿದ್ಧಮಾಡಿರಿ; ಎತ್ತರ ಮಾಡಿರಿ, ರಾಜ ಮಾರ್ಗವನ್ನು ಎತ್ತರಮಾಡಿರಿ; ಕಲ್ಲುಗಳನ್ನು ಆಯ್ದು ಕೂಡಿಸಿರಿ; ಜನಗಳಿಗೋಸ್ಕರ ಧ್ವಜವನ್ನು ಎತ್ತಿರಿ.
11 ಇಗೋ, ಕರ್ತನು ಭೂಮಿಯ ಅಂತ್ಯದ ವರೆಗೆ ಪ್ರಕಟಿಸಿದ್ದಾನೆ. ಚೀಯೋನಿನ ಕುಮಾ ರಿಯೇ--ಇಗೋ, ನಿನ್ನ ರಕ್ಷಣೆಯು ಬರುತ್ತದೆ; ಆತನ ಬಹುಮಾನವು ಆತನ ಸಂಗಡವೂ ಆತನ ಕೆಲಸವು ಆತನ ಮುಂದೆಯೂ ಅದೆ ಎಂದು ಹೇಳಿರಿ.
12 ಆಗ ಅವರು--ಪರಿಶುದ್ಧ ಜನರೂ ಕರ್ತನು ವಿಮೋಚಿಸಿದ ವರೂ ಎಂದು ಕರೆಯಲ್ಪಡುವರು; ನೀನು ಕಂಡು ಕೊಳ್ಳಲ್ಪಟ್ಟವಳೂ ತೊರೆಯಲ್ಪಡದ ಪಟ್ಟಣವೂ ಎಂದು ಕರೆಯಲ್ಪಡುವಿ.